Showing posts with label ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ. Show all posts
Showing posts with label ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ. Show all posts

Sunday, September 7, 2008

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ

ರಚನೆ: ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ
ಸ೦ಗೀತ: ಮೈಸೂರು ಅನಂತಸ್ವಾಮಿ
ಹಿನ್ನಲೆ ಗಾಯನ: ಪಲ್ಲವಿ ಅರುಣ್



ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ

ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರ ಇಲ್ಲದ ರಾತ್ರಿ ಬೀಳು
ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರನಿಲ್ಲದ ರಾತ್ರಿ ಬೀಳು
ನೀ ಸಿಗದೆ ಉರಿ ಉರಿ ಕಳೆದೆ ಇರುಳ
ಮಾತಿಲ್ಲ ಬಿಗಿದಿದೆ ದುಃಖ ಕೊರಳ

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ...

ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ...

ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ಆ ರೂಪ ತೋರೋ
ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ಆ ರೂಪ ತೋರೋ
ಜನುಮ ಜನುಮದಾ ರಾಗ ನನ್ನ ಪ್ರೀತಿ
ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೆ ಅದರ ರೀತಿ

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ...

Thursday, June 21, 2007

ಬಂದೇ ಬರತಾವ ಕಾಲಾ

ಚಿತ್ರ: ಸ್ಪಂದನ
ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
ಸಂಗೀತ: ರಾಜನ್ ನಾಗೇಂದ್ರ
ಹಿನ್ನಲೆ ಗಾಯನ: ಪಿ.ಸುಶೀಲ

ಬಂದೇ ಬರತಾವ ಕಾಲಾ
ಬಂದೇ ಬರತಾವ ಕಾಲಾ
ಮಂದಾರ ಕನಸನು
ಕಂಡಂತ ಮನಸನು
ಒಂದು ಮಾಡುವ ಸ್ನೇಹ ಜಾಲಾ

ಮಾಗಿಯ ಎದೆ ತೂರಿ
ಕೂಗಿತೊ ಕೋಕಿಲ
ರಾಗದ ಚಂದಕೆ
ಬಾಗಿತೊ ಬನವೆಲ್ಲ
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ

ಬಂದೇ ಬರತಾವ ಕಾಲಾ...

ಹುಣ್ಣಿಮೆ ಭಾನಿಂದ
ತಣ್ಣನೆ ಸವಿ ಹಾಲು
ಚೆಲ್ಲುತ ಮೆಲ್ಲನೆ
ನಲಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಭುವಿ ಭಾನು ಸೇರಿ ಹರಸಾವು ಬಾಳನು

ಬಂದೇ ಬರತಾವ ಕಾಲಾ...

Tuesday, June 12, 2007

ಮಲಗು ಮಲಗೆನ್ನ ಮರಿಯೆ

ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಮಲಗು ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಧರೆಗೆ

ಜೋ..ಜೋಜೋಜೋ...

ತಾವರೆ ದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ
ನಿದಿರೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು
ಜೋ..ಜೋಜೋಜೋ...

ಮಲಗು ಮಲಗೆನ್ನ ಮರಿಯೆ...

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ
ಚೆಲುವಿಗೆ ಸಾಟಿಯೆ ಕಾಮ
ತಿಮ್ಮಪ್ಪನಿಗೆ ಮೂರು ನಾಮ
ಜೋ..ಜೋಜೋಜೋ...

ಮಲಗು ಮಲಗೆನ್ನ ಮರಿಯೆ...

ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ

ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ
ಏನೋ ಶಂಕೆ ಭೀತಿ

ಹಿಂದೆ ಹೇಗೆ ಚಿಮ್ಮುತಿತ್ತು ...

ಜೇನು ಸುರಿಯುತಿತ್ತು ನಿನ್ನ
ದನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ
ಮಾತು ಮಾತಿನಲ್ಲಿ

ಹಿಂದೆ ಹೇಗೆ ಚಿಮ್ಮುತಿತ್ತು ...

ಒಂದು ಸಣ್ಣ ಮಾತಿನಿರಿತ
ತಾಳದಾಯ್ತೆ ಪ್ರೇಮ
ಜೀವವೆರಡು ಕೂಡಿ ಉಂಡ
ಸ್ನೇಹವಾಯ್ತೆ ಹೋಮ

ಹಿಂದೆ ಹೇಗೆ ಚಿಮ್ಮುತಿತ್ತು ...

ಹಮ್ಮು ಬೆಳದು ನಮ್ಮ ಬಾಳು
ಆಯ್ತು ಎರಡು ಸೀಳು
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು

ಹಿಂದೆ ಹೇಗೆ ಚಿಮ್ಮುತಿತ್ತು ...

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ರಚನೆ: - ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿ ಸಾಲ
ಮೀಟಿ ಹಳೆಯ ಮಧುರ ನೋವ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ...

ಬಾನಿನಲ್ಲಿ ಒಂಟಿ ತಾರೆಸೋನೆ
ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ...

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ..