Showing posts with label ಕೆ.ಎಸ್. ನರಸಿಂಹಸ್ವಾಮಿ. Show all posts
Showing posts with label ಕೆ.ಎಸ್. ನರಸಿಂಹಸ್ವಾಮಿ. Show all posts

Thursday, June 7, 2007

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ

ರಚನೆ: ಕೆ.ಎಸ್. ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು

ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಳಸಿ ಕೃಷ್ಣತುಳಸಿ
ನೀಲಾಂಬರನ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ...

ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರಪಂಜರದೊಳಗೆ ಸೆರೆಯಾದ ಗಿಳಿಯಲ್ಲ
ಐದು ತಿಂಗಳ ಕಂದ ನಗುತಲಿಹುದು

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ...

ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೆನೇ ನಾನು ಇಲ್ಲಿ

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ...

ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದಲಿ
ಅಚ್ಚ ಮಲ್ಲಿಗೆ ಹೂವು ಅರಳು ಬಿರಿಯುತಿಹುದು
ಬಂದುಬಿಡುವೆನು ಬೇಗ ಮುನಿಯದಿರಿ ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು

Wednesday, June 6, 2007

ನಿನ್ನ ಪ್ರೇಮದ ಪರಿಯ

ಮೈಸೂರು ಮಲ್ಲಿಗೆ - ನಿನ್ನ ಪ್ರೇಮದ ಪರಿಯ
ರಚನೆ: ಕೆ.ಎಸ್.ನರಸಿಂಹ ಸ್ವಾಮಿ


ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೋಳಿದೆ ನನ್ನ ಮನಸ್ಸು

ಸಾಗರನ ಹೃದಯದಲಿ
ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲ್ಲೆ
ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ನಿನ್ನೋಳಿದೆ ನನ್ನ ಮನಸ್ಸು

ನಿನ್ನ ಪ್ರೇಮದ ಪರಿಯ ...

ಅಲೆಬಂದು ಕರೆಯುವುದು
ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ
ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ
ನಿನ್ನೋಳಿದೆ ನನ್ನ ಮನಸ್ಸು

ನಿನ್ನ ಪ್ರೇಮದ ಪರಿಯ ...