Showing posts with label amma. Show all posts
Showing posts with label amma. Show all posts

Wednesday, May 5, 2010

ಅಮ್ಮ ಎಂದರೆ ಏನೋ ಹರುಷವು

ಚಿತ್ರ: ಕಳ್ಳ ಕುಳ್ಳ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್, ಕೃಷ್ಣಮೂರ್ತಿ



ಅಮ್ಮ ಎಂದರೆ ಏನೋ ಹರುಷವು
ನಮ್ಮಾ ಪಾಲಿಗೆ ಅವಳೇ ದೈವವು
ಅಮ್ಮಾ ಎನ್ನಲೂ ಎಲ್ಲಾ ಮರೆತೆವು
ಎಂದೂ ಕಾಣದಾ ಸುಖವಾ ಕಂಡೆವು.

ಮೂರು ನದಿಯು ಸೇರಿ ಹರಿದು ಬಂದರೇನು?
ಜನರು ಅದರ ರಭಸ ಕಂಡು ಕಡಲು ಎನುವರೇನು?
ಕೋಟಿ ದೇವರೆಲ್ಲಾ ಕೂಡಿ ನಿಂತರೇನು
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು
ಎಂದೋ ಕನಸಲಿ ಕಂಡಾ ನೆನಪಿದೆ
ಇಂದು ನಿನ್ನ ಕಾಣೋ ಆಸೆ ಎದೆಯಾ ತುಂಬಿದೆ

ಅಮ್ಮ ಎಂದರೆ ಏನೋ ಹರುಷವು...

ನನ್ನೀ ವಯಸು ಮರೆವೆ ಮಗುವೇ ಆಗಿ ಬಿಡುವೆ
ಅಮ್ಮ ನಿನ್ನ ಕಂದ ಬಂದೆ ನೋಡು ಎನ್ನುವೆ
ನನ್ನೀ ತೋಳಿನಲ್ಲಿ ಅವಳ ಬಳಸಿ ನಲಿವೆ
ಇನ್ನೂ ನಿನ್ನ ಎಂದೂ ಬಿಟ್ಟು ಇರೆನು ಎನ್ನುವೆ
ತಾಯಿ ಮಡಿಲಲಿ ನಾವು ಹೂಗಳು
ನಮ್ಮಾ ಬಾಳೀಗೆ ಅವಳೇ ಕಂಗಳು.

ಅಮ್ಮ ಎಂದರೆ ಏನೋ ಹರುಷವು...

Tuesday, May 4, 2010

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ

ಚಿತ್ರ: ಕೆರಳಿದ ಸಿಂಹ
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್, ಡಾ.ಪಿ.ಬಿ.ಶ್ರೀನಿವಾಸ್

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ

ಬಾಡದ ತಾವರೆ ಹೂವಿನ ಹಾಗೆ ಎಂದಿಗು ಆರದ ಜ್ಯೋತಿಯ ಹಾಗೆ
ಗೋಪುರವೇರಿದ ಕಲಶದ ಹಾಗೆ ಆ ಧೃವ ತಾರೆಯೆ ನಾಚುವ ಹಾಗೆ
ಜೊತೆಯಲಿ ಎಂದೆಂದು ನೀನಿರಬೇಕು ಬೇರೆ ಏನು ಬೇಡೆವು ನಾವು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

ಸಂಜೆಯ ಗಾಳಿಯ ತಂಪಿನ ಹಾಗೆ ಮಲ್ಲಿಗೆ ಹೂವಿನ ಕಂಪಿನ ಹಾಗೆ
ಜೀವವ ತುಂಬುವ ಉಸಿರಿನ ಹಾಗೆ ನಮ್ಮನು ಸೇರಿ ಎಂದಿಗು ಹೀಗೆ
ನಗುತಲಿ ಒಂದಾಗಿ ನೀನಿರಬೇಕು ನಿನ್ನ ನೆರಳಲಿ ನಾವಿರಬೇಕು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು
ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆನಂದ ತಂದರೆ ಸಾಕು ಬೇರು ಪೂಜೆ ಏತಕೆ ಬೇಕು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

Monday, May 3, 2010

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ

ಚಿತ್ರ : ಭಲೇಜೋಡಿ
ರಚನೆ: ಚಿ.ಉದಯಶಂಕರ್
ಸಂಗೀತ: ಆರ್. ರತ್ನ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್



ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ
ನಾ ಅಮ್ಮ ಎಂದಾಗ ಏನು ಸಂತೋಷವು
ನಿನ್ನ ಕಂಡಾಗ ಮನಕೇನು ಆನಂದವು
ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು..
ಪುಣ್ಯದ ಫಲವೊ
ದೇವರ ವರವೊ
ಸೇವೆಯ ಭಾಗ್ಯ ನನ್ನದಾಯ್ತು

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ತಾಯಿಯ ಮಮತೆ ಕಂಡ ದೇವನು
ಅಡಗಿದ ಎಲ್ಲೊ ಮರೆಯಾಗಿ
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆಬಾಗಿ


ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

Sunday, May 2, 2010

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು

ಚಿತ್ರ: ಕಪ್ಪು ಬಿಳುಪು
ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ಆರ್. ರತ್ನ
ಹಿನ್ನಲೆ ಗಾಯನ : ಪಿ.ಸುಶೀಲ



ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು
ಓಹೋ...ಓಹೋ...........

ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...

ನೀನು ಇತ್ತ ಹಣ್ಣುಗಳೆ ಅನ್ನ ನನಗೆ
ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲೂ ನಿನ್ನ ಛಾಯೆ

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...

ಊರುಬೇಡ ಕೇರಿಬೇಡ ಯಾರೂ ಬೇಡಾ
ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲಾ

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...

Thursday, July 24, 2008

ಅಮ್ಮ…ನಿನ್ನ ಎದೆಯಾಳದಲ್ಲಿ

ರಚನೆ: ಬಿ.ಆರ್.ಲಕ್ಷ್ಮಣರಾವ್

ಅಮ್ಮ…ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ಈ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ !

ಅಮ್ಮ…ನಿನ್ನ ಎದೆಯಾಳದಲ್ಲಿ...

ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು
ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ !

ಅಮ್ಮ…ನಿನ್ನ ಎದೆಯಾಳದಲ್ಲಿ...